ಬ್ರುಂಟನ್, ತಾಮಸ್ ಲಾಡರ್   1844-1916. ಔಷಧಿವಿಜ್ಞಾನ ಪರಿಣತ. ರಾಕ್ಸ್‍ಬರ್ಗ್‍ಶೈರ್‍ನ ರೈತ ಕುಟುಂಬದಲ್ಲಿ ಜನನ. 1866ರಲ್ಲಿ ಎಡಿನ್‍ಬರೋ ವಿಶ್ವವಿದ್ಯಾಲಯದ ವೈದ್ಯಕೀಯ ಪದವಿಯನ್ನೂ, 1868ರಲ್ಲಿ ವೈದ್ಯಕೀಯ ಸ್ನಾತಕೋತ್ತರ (ಎಂ.ಡಿ) ಪದವಿಯನ್ನೂ ಪಡೆದ. ಆಗ ಲಭಿಸಿದ ಬಾಕ್‍ಸ್ಟರ್ ನೈಸರ್ಗಿಕ ವಿಜ್ಞಾನ ಶಿಷ್ಯವೃತ್ತಿಯ ಫಲವಾಗಿ ವಿದೇಶದಲ್ಲಿ ಸಂಚರಿಸಿ ಅಧ್ಯಯನ ಮಾಡುವ ಅವಕಾಶ ಒದಗಿತು. ಲಂಡನ್ ಮಿಡಲ್‍ಸೆಕ್ಸ್ ಆಸ್ಪತ್ರೆಯಲ್ಲಿ ಔಷಧಿ ಮತ್ತು ಔಷಧಿವಿಜ್ಞಾನದ ಅಧ್ಯಾಪಕನಾಗಿ ಒಂದು ವರ್ಷ ಕಾರ್ಯಮಾಡಿ ಅನಂತರ ಸಂತ ಬಾರ್ಥೆಲೋಮ ಆಸ್ಪತ್ರೆಯ ಹೊರರೋಗಿ ಚಿಕಿತ್ಸಾ ವಿಭಾಗದಲ್ಲಿ 20 ವರ್ಷ ಸೇವೆ ಸಲ್ಲಿಸಿ 1895ರಲ್ಲಿ ಮುಖ್ಯ ವೈದ್ಯನಾದ. ಆ ಕಾಲಾವಧಿಯಲ್ಲಿ ಈತ ಔಷಧಿಗಳ ಕಾರ್ಯ ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಪ್ರತಿಭಾನ್ವಿತ ರೀತಿಯಲ್ಲಿ ಉಪನ್ಯಾಸ ನೀಡಿ ಹೆಸರುಗಳಿಸಿದ. ಹದಿನೈದು ವರ್ಷಗಳ ಸತತ ಪರಿಶ್ರಮದಿಂದ ಈತ ಔಷಧಿ, ಔಷಧಿಗೆ ವಸ್ತುಗಳು ಮತ್ತು ರೋಗಚಿಕಿತ್ಸೆ ಬಗೆಗೆ ಪಠ್ಯಪುಸ್ತಕ ರಚಿಸಿದ. ಇದು ಅನೇಕ ವಿದೇಶಿ ಭಾಷೆಗಳಿಗೆ ತರ್ಜುಮೆಗೊಂಡಿತು. ಈ ಬರೆವಣಿಗೆಯ ವಿಷಯವೆಲ್ಲವೂ ಅಂಗಕ್ರಿಯಾವಿಜ್ಞಾನವನ್ನು ಆಧರಿಸಿ ಪ್ರಯೋಗಶಾಲೆಯಲ್ಲಿ ಕೈಗೊಂಡ ಪ್ರಯೋಗಗಳಿಂದ ದೃಢೀಕರಿಸಲ್ಪಟ್ಟಿದ್ದಿತು. ಔಷಧಿಗಳ ಕಾರ್ಯವಿಧಾನವನ್ನು ಸಮರ್ಪಕವಾಗಿ ಅರಿಯದೆ ಈತ ಯಾವ ಚಿಕಿತ್ಸೆಯನ್ನೂ ಕೈಗೊಳ್ಳುತ್ತಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ತನ್ನನ್ನೇ ಪ್ರಯೋಗ ಪಶುವಾಗಿ ಬಳಸಿಕೊಂಡದ್ದಿತ್ತು.

	ಡಿಜಿಟ್ಯಾಲಿಸ್ ದೇಹಾದ್ಯಂತ ಅದರಲ್ಲೂ ವಿಶೇಷವಾಗಿ ಮೂತ್ರಪಿಂಡದ ಧಮನಿಭಿತ್ತಿಯಲ್ಲಿಯ ನರತಂತುಗಳನ್ನು ಉತ್ತೇಜಿಸಿ ಮೂತ್ರವರ್ಧಕವಾಗಿ ಕಾರ್ಯಮಾಡಬಲ್ಲದೆಂಬುದನ್ನು ತೋರಿಸಿದ. ಸಕ್ಕರೆಯನ್ನು ದೇಹದ ಬಳಕೆಗೆ ಬೇಕಾಗುವಂತೆ ವಿಭಜಿಸುವ ಕಿಣ್ವ ಸ್ನಾಯುಗಳಲ್ಲಿರುವುದನ್ನು ಈತ ಸಿದ್ಧ ಮಾಡಿದ. ಎಮೈಲ್‍ನೈಟ್ರೈಟಿನ 5-10 ಹನಿಗಳನ್ನು ಬಟ್ಟೆಯ ಮೇಲೆ ಸುರಿಸಿ ಅದರ ವಾಸನೆ ಹೀರಿದರೆ ಹೃದಯವೇದನೆ ನಿಮಿಷದಲ್ಲಿ ದೂರವಾಗುವುದನ್ನು ಬ್ರುಂಟನ್ ಮೊದಲ ಬಾರಿಗೆ ತೋರಿಸಿದ. 		(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ